ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್ ಕರ್ನಾಟಕ ರಾಜ್ಯದ, ಆಧುನಿಕ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ, ಹಾಗೂ ಖಾಸಗಿ ಹಬ್ರಿಡ್ ಬೀಜಗಳ ಉತ್ಪಾದನೆಯ ರೂವಾರಿ. ಬೆಂಗಳೂರಿನ ಅತ್ಯಂತ ಆಧುನಿಕ, ಮತ್ತು ಪ್ರಗತಿಪರ ಹೈಬ್ರಿಡ್ ಬೀಜಗಳ ಉತ್ಪಾದನಾ ವಾಣಿಜ್ಯೋದ್ಯಮದ ಸ್ಥಾಪನೆಮಾಡಿದ ಖ್ಯಾತಿ, ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್ ಅವರದು, == ಜನನ, ಶಿಕ್ಷಣ ಹಾಗೂ ವೃತ್ತಿ == ದಕ್ಷಿಣಜಿಲ್ಲೆಯ ಕಾರ್ಕಳದಲ್ಲಿ, ೧೯೩೨ ರಲ್ಲಿ ಜನಿಸಿದರು. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದ ಕೃಷಿವಿದ್ಯಾಲಯಕ್ಕೆ ಸೇರಿ, ಅಲ್ಲಿ ಕೃಷಿಯಲ್ಲಿ ಸ್ನಾತಕೋತ್ತರದ್ಯಾಭ್ಯಾಸ ಮುಂದುವರೆಸಿದರು. ಹೈಬ್ರಿಡ್ ತಳಿಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುವ ತರಪೇತಿಯನ್ನೂ ಪಡೆದರು. ಅಲಂಕಾರಿಕ ತೋಟಗಾರಿಕೆ, ಮತ್ತು "ಹಸಿರುಮನೆ," ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು ೧೯೬೩-೬೫ ರಲ್ಲಿ, ಅಮೆರಿಕದ ಖ್ಯಾತ "ಪ್ಯಾನ್ ಅಮೆರಿಕನ್ ಸೀಡ್," ಕಂಪೆನಿಯಲ್ಲಿ, "ಸಸ್ಯತಳಿ ಸಂಕರಣವಿಜ್ಞಾನಿಯಾಗಿ", ಅಪಾರ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಮಹತ್ತಿನ ಕನಸುಗಳಲ್ಲೊಂದಾದ ಸಂಪದ್ಭರಿತ ತೋಟಗಾರಿಕಾ ರಂಗವನ್ನು ರಚಿಸಿ, ಅಮೆರಿಕದಷ್ಟೇ ನಮ್ಮ ಭಾರತದಲ್ಲೂ , ವಾಣಿಜ್ಯೀಕರಣಗೊಳಿಸುವ ಮಹತ್ತರ ಆಸೆಯನ್ನು ಕಾರ್ಯರೂಪಕ್ಕೆ ತಂದರು. ಕಾರ್ಕಳದ ಜನಮನದಲ್ಲಿ ಮೆಚ್ಚುಗೆಗೆ ಪಾತ್ರರು. == "ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ" == ಭಾರತಕ್ಕೆ ಬಂದ ಹೊಸದರಲ್ಲೇ ೧೯೬೫ ರಲ್ಲಿ ಬೆಂಗಳೂರಿನಲ್ಲಿ, "ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ"ಯನ್ನು ಸ್ಥಾಪಿಸಿದರು. ಈತರಹದ ಖಾಸಗೀ ಕಂಪೆನಿ ಭಾರತದಲ್ಲೇ ಪ್ರಥಮವಾದ ಪ್ರಯೋಗವಾಗಿತ್ತು. ಅಲ್ಲಿನ ಹವಾನಿಯಂತ್ರಿತ "ಗ್ರೀನ್ ಹೌಸಿನಲ್ಲಿ" ಅಲಂಕಾರಿಕ ಪುಷ್ಪಗಳ ಬೀಜೋತ್ಪದನೆಯನ್ನು ಶುರುಮಾಡಿ, ಅದನ್ನು ಅನೇಕ ತರಕಾರಿಗಳು ಮತ್ತು ವಿಧ-ವಿಧವಾದ ಪುಷ್ಪಗಳಿಗೆ ವಿಸ್ತರಿಸಿದರು. ಈಗ ಈ ಸಂಸ್ಥೆ, ಉನ್ನತ ತಂತ್ರಜ್ಞಾನಗಳ ಖನಿಜವಾಗಿದ್ದು, ದೇಶದ ಪ್ರಪ್ರಥಮ ರಫ್ತುಆಧಾರಿತ ತೋಟಗಾರಿಕೆ ಉದ್ಯಮ ಕ್ಷಮತೆಯನ್ನು ಪಡೆದಿದೆ. ಅಮೆರಿಕ,ಮತ್ತು ಯೂರೋಪಿನ ಅನೇಕಾನೇಕ ದೇಶಗಳಿಗೆ ಮನಮೋಹನ್ ಅತ್ತಾವರ್ ರವರು, ಉತ್ಪಾದಿಸಿದ,ಹೈಬ್ರಿಡ್ ಬೀಜಗಳು, ಸಸಿಗಳು, ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ. ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿ,ಯ ಹೆಮ್ಮೆಯ ಉತ್ಪಾದನೆಯಾಗಿದ್ದ "ಹೈಬ್ರಿಡ್ ಟೊಮ್ಯಾಟೊ" ತಳಿಗಳು ಜನಪ್ರಿಯತೆಯ ಚಿಲುಮೆಯನ್ನೇ ಶಿಖರಕ್ಕೇರಿಸಿದವು. ಅತ್ತಾವರ್ ರ ಸೇವೆ, ಮತ್ತು ಸಾಧನೆಗಳಿಂದ ಲಕ್ಷಾಂತರ ರೈತಕುಟುಂಬಗಳು ಸುಧಾರಿತ ಹೈಬ್ರಿಡ್ ಹಣ್ಣು, ಹೂ, ತರಕಾರಿಗಳನ್ನು ಬೆಳೆದು, ತಮ್ಮ ಆರ್ಥಿಕಸ್ಥಿತಿಯನ್ನು ಉತ್ತಮಪಡಿಸುವುದರಜೊತೆಗೆ, ಜನಸಾಮಾನ್ಯರಿಗೆ ಅಗತ್ಯವಿದ್ದ ಪೌಷ್ಟಿಕ ಹಣ್ಣು, ತರಕಾರಿಗಳು, ಅಪಾರ ಪ್ರಮಾಣದಲ್ಲಿ ಮತ್ತು ಸಾರ್ವತ್ರಿಕವಾಗಿ ದೊರಕುವಂತಾದವು. ಅಪಾರಪ್ರಮಾಣದಲ್ಲಿ, ಅಮೂಲ್ಯ ವಿದೇಶೀ-ವಿನಿಮಯ ಲಭಿಸುವಂತಾಯಿತು. ವಿದೇಶಗಳಿಂದ ಬಂದ ಹಲವು ಗಣ್ಯರು, ಇವರ ಪ್ರಯತ್ನ ಹಾಗೂ ಕಾರ್ಯವಿಧಾನಗಳನ್ನು ಕೊಂಡಾಡಿದ್ದಾರೆ, ಮತ್ತು ಈ ದಾರಿಯಲ್ಲಿ ಮುಂದುವರೆಯುವರಿಗೆ ಮಾದರಿಯಾಗಲೆಂದು ಹಾರೈಸಿದ್ದಾರೆ. ಅತ್ತಾವರ್ ರ ಕರ್ತೃತ್ವಶಾಲಿ ಪ್ರಯತ್ನಗಳಿಂದಾಗಿ, ಲಕ್ಷಾಂತರ ಗ್ರಾಮೀಣಜನರಿಗೆ, ಹಾಗೂ ನಗರ ಪ್ರದೇಶಗಳ ಜನರಿಗೆ ಉದ್ಯೋಗಾವಕಾಶವಾಗಿದೆ. == ಗೌರವ, ಸನ್ಮಾನ ಪ್ರಶಸ್ತಿ ಪಾರಿತೋಷಕಗಳು: == ಭಾರತ ಸರ್ಕಾರದ, "ಪದ್ಮಶ್ರೀ ಪ್ರಶಸ್ತಿ", ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಧಾರವಾಡ ಕೃಷಿವಿಶ್ವವಿದ್ಯಾಲಯದವರು ನೀಡಿದ, 'ಗೌರವ ಡಾಕ್ಟೊರೇಟ್' ಗಳು. ಡಾ.ಎಂ.ಎಚ್.ಮರಿಗೌಡ ರಾಷ್ಟ್ರೀಯ ಪ್ರಶಸ್ತಿ, ಐ.ಸಿ.ಎ.ಸುವರ್ಣ ಮಹೋತ್ಸವ ಅಂತರರಾಷ್ಟ್ರೀಯ ಪ್ರಶಸ್ತಿ, ಐ.ಎಸ್‌.ಎಫ್.ಪ್ರಶಸ್ತಿ. == ಕರ್ನಾಟಕಕ್ಕೆ 'ಡಾ. ಅತ್ತಾವರ್' ರವರ ಕೊಡುಗೆ == ಕರ್ನಾಟರಾಜ್ಯ, ತೋಟಗಾರಿಕೆಯಲ್ಲಿ "ಅತ್ಯಂತಪ್ರಗತಿಪರ, ಮತ್ತು ಮಾದರಿರಾಜ್ಯ,"ವೆಂಬ ಖ್ಯಾತಿಗಳಿಸಲು ಮೇಲೆ ಹೆಸರಿಸಿದ 'ಅತ್ತಾವರ್' ರಂತೆಯೇ ತಮಗೆ ದೊರೆತ ಸಣ್ಣಪುಟ್ಟ ಅವಕಾಶಗಳಲ್ಲಿ ಮಹತ್ತರವಾದ ಕಾರ್ಯಗಳಿಂದ, ಸ್ತುತ್ಯಾರ್ಹಸೇವೆ ಸಲ್ಲಿಸಿದ ಅನೇಕ ಮಹನೀಯರುಗಳಿದ್ದಾರೆ. ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಹಾಗೂ ಏಳಿಗೆಗೆ ಅನೇಕ ವಿಜ್ಞಾನಿಗಳು, ಅಧಿಕಾರಿಗಳು, ಹಾಗೂ ರೈತರು, ಅಹರ್ನಿಶಿ ಶ್ರಮಿಸಿದ್ದಾರೆ. ಇವರೆಲ್ಲಾ ಅತ್ತಾವರರಂತೆಯೇ ಶ್ಲಾಘನೆಗೆಗೆ ಪಾತ್ರರು. ತಮ್ಮ ಪರಿಶ್ರಮ, ಸಾಧನೆ, ಹಾಗೂ ತ್ಯಾಗಗಳ ಮೂಲಕ ತೋಟಗಾರಿಕೆ-ವಾಣಿಜ್ಯೋದ್ಯಮವನ್ನು ಶ್ರೀಮಂತಗೊಳಿಸಿ ಸಮಗ್ರ ಭಾರತದೇಶದ ಕೀರ್ತಿಗೆ ಪಾತ್ರರಾಗಿದ್ದಾರೆ. ಅತ್ತಾವರ್ ರವರ "ವೆಬ್ ಸೈಟ್ " ನ್ನು ವೀಕ್ಷಿಸಿ. ಅವರ ಈ ಕೊಡುಗೆಯನ್ನು ಪ್ರಶಂಸಿಸಿ, ಪ್ರಶಸ್ತಿ ಪುರಸ್ಕಾರಗಳ ಒಂದು ದೊಡ್ಡ ಪಟ್ಟಿಯೇ ತಯಾರಾಯಿತು. == ನಿಧನ == ೮೫ ವರ್ಷ ವಯಸ್ಸಿನ ಮನಮೋಹನ್ ಅತ್ತಾವರ್ ರವರು, ಬೆಂಗಳೂರಿನಲ್ಲಿ ಬಹಳ ವರ್ಷ ವಾಸವಾಗಿದ್ದರು. ಸ್ವಲ್ಪ ಕಾಯಿಲೆಯಿಂದ ನರಳುತ್ತಿದ್ದ ಅವರು ಮಂಗಳೂರಿಗೆ ಹೋದಾಗಲೇ ಮಂಗಳವಾರ ೧೨, ಡಿಸೆಂಬರ್, ೨೦೧೭ ರಂದು ನಿಧನರಾದರು. ಅವರಿಗೆ ಪತ್ನಿ ಮಮತಾ, ಹಾಗೂ ಇಬ್ಬರು ಮಕ್ಕಳಿದ್ದಾರೆ. == ಉಲ್ಲೇಖಗಳು ==